ಧೂರ್ಜಟಿ
ತೆಲುಗು ಕವಿ.  ಶ್ರೀ ಕೃಷ್ಣದೇವರಾಯನ (16 ನೆಯ ಶತಮಾನ)  ಆಸ್ಥಾನ ಕವಿಗಳಲ್ಲಿ ಒಬ್ಬ;  ಶಿವಭಕ್ತ.  ತಾಯಿ ತಂದೆಯರು ಸಿಂಗಮ ಮತ್ತು ನಾರಾಯಣಾಮಾತ್ಯ.  ಶ್ರೀಕೃಷ್ಣದೇವರಾಯ ಈತನನ್ನು ಬಹುವಾಗಿ ಮೆಚ್ಚಿಕೊಂಡಿದ್ದ.  ಈತ ರಾಜಾಸ್ಥಾನದಲ್ಲಿದ್ದರೂ ತನ್ನ ಕೃತಿಗಳನ್ನು ನರಾಂಕಿತ ಮಾಡದೆ ಶಿವನಿಗೆ ಅರ್ಪಿಸಿದ್ದಾನೆ.

ಈತನ ವೈಯಕ್ತಿಕ ಜೀವನದ ಬಗೆಗೆ ಅಷ್ಟಾಗಿ ತಿಳಿಯದು.   ಈತ ಬರೆದಿರುವ ಶ್ರೀಕಾಳಹಸ್ತಿ ಮಹಾತ್ಮ್ಯಮು ಮತ್ತು ಶ್ರೀಕಾಳಹಸ್ತೀಶ್ವರ ಶತಕಮು ಎಂಬ ಗ್ರಂಥಗಳಲ್ಲಿ ಈತನ ಬಗ್ಗೆ  ಕೆಲವು ವಿಷಯಗಳು ಬಂದಿವೆ.  ಶತಕ ಈತನದಲ್ಲವೆಂದು ಕೆಲವರ ಅಭಿಪ್ರಾಯ.  ಈತನನ್ನು ಕುರಿತ ಒಂದು ಕಥೆ ಹೀಗಿದೆ.  ಒಮ್ಮೆ ಶ್ರೀಕೃಷ್ಣದೇವರಾಯ ಧೂರ್ಜಟಿಯ ಮಾತುಗಳಲ್ಲಿ ಇಷ್ಟೊಂದು ಮಾಧುರ್ಯ ಹೇಗೆ ಬಂತು ಎಂದು ಕೇಳಿದಾಗ ತೆನಾಲಿ ರಾಮಲಿಂಗ ಕವಿ ಸತತವಾಗಿ ಪಡೆದ ವಾರವನಿತೆಯರ ಅಧರ ಸುಧಾರಸದ ಆಸ್ವಾದನೆ ಕಾರಣವಿರಬೇಕೆಂದು ಉತ್ತರಿಸಿದನಂತೆ.

ಶ್ರೀಕಾಳಹಸ್ತೀಶ್ವರ ಶತಕ ತೆಲುಗು ಶತಕ ಶಾಹಿತ್ಯದ ಅತ್ಯಂತ ಪ್ರಾಚುರ್ಯ ಪಡೆದ ಕೃತಿ.  ಕವಿ ಇಲ್ಲಿ ತನ್ನ ಶಿವಭಕ್ತಿಯನ್ನು ಲೋಕಾನುಭವವನ್ನು ಹೃದಯ ಸಂವೇದನೆಯನ್ನು ಆತ್ಮಾಶ್ರಯ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ.  ತೆಲುಗಿನಲ್ಲಿ ಪ್ರಾಚೀನ ಸಾಹಿತ್ಯದ ಆತ್ಮನಿಷ್ಠ ಕಾವ್ಯಗಳಲ್ಲಿ ಇದು ಅತ್ಯಂತ ಶ್ರೇಷ್ಟವಾದುದು.  ಈ ಶತಕ ಮತ್ತೇಭ ಮತ್ತು ಶಾರ್ದೂಲವಿಕ್ರೀಡಿತ ವೃತ್ತಗಳಲ್ಲಿದೆ.  ಕೃತಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿ ನೆಲೆಸಿರುವ ಈಶ್ವರನಿಗೆ ಅರ್ಪಿತವಾಗಿದೆ.  ಪ್ರತಿಪದ್ಯವೂ ಶ್ರೀಕಾಳಹಸ್ತೀಶ್ವರಾ ಎಂದು ಕೊನೆಗೊಳ್ಳುತ್ತದೆ.  ವಿದ್ಯೆ, ಶಾಸ್ತ್ರಪಾಂಡಿತ್ಯ, ಪ್ರತಿಭೆ ಎಷ್ಟಿದ್ದರೂ ಭಕ್ತಿಯಿಲ್ಲದೆ ಅವು ಪ್ರಕಾಶಿಸುವುದಿಲ್ಲವೆಂದು ಕವಿ ಹೇಳಿದ್ದಾನಲ್ಲದೆ ಶೈವಸಾಹಿತ್ಯದಲ್ಲಿ ಕೇಳಿಬರುವ ಅನೇಕ ಶಿವಭಕ್ತರನ್ನು ಕುರಿತು ಅಲ್ಲಲ್ಲಿ ಪ್ರಸ್ತಾವಿಸಿದ್ದಾನೆ.  ಪ್ರೌಢವಾದ ಶೈಲಿ, ಅಲ್ಲಲ್ಲಿ ಕಾಣುವ ಸ್ವತಂತ್ರ ಪ್ರಯೋಗಗಳಿಂದಾಗಿ ಈ ಕೃತಿ ಮಹತ್ತ್ವ ಪಡೆದಿದೆ.

ಶಿವಾರ್ಪಿತವಾದ ಶ್ರೀಕಾಳಹಸ್ತಿ ವೂಹಾತ್ಮ್ಯಮು ಎಂಬ ಕೃತಿಗೆ ತೆಲುಗು ಕ್ಷೇತ್ರ ಮಹಾತ್ಮ್ಯ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ.  ಶೈವಧರ್ಮವನ್ನು ಕುರಿತ ಈ ಕಾವ್ಯದಲ್ಲಿ ನಾಲ್ಕು ಆಶ್ವಾಸಗಳಿದ್ದು 756 ಗದ್ಯಪದ್ಯಗಳಿವೆ.  ಶ್ರೀ ಎಂದರೆ ಜೇಡ, ಕಾಳ ಎಂದರೆ ಹಾವು, ಹಸ್ತಿ ಎಂದರೆ ಆನೆ.  ಈ ಮೂರು ಪ್ರಾಣಿಗಳಿಗೆ ಶಿವನಿಂದ ಮುಕ್ತಿ ದೊರಕಿಸುವುದರಿಂದ ಈ ಕ್ಷೇತ್ರಕ್ಕೆ  ಶ್ರೀಕಾಳಹಸ್ತಿ ಎಂಬ ಹೆಸರು ಬಂದಿದೆ.  ಧೂರ್ಜಟಿಯ ಕಾವ್ಯದಲ್ಲಿ  ಈ ಮೂರು ಪ್ರಾಣಿಗಳೂ ಮುಕ್ತಿ ಹೊಂದಿದ ಕಥೆ ಇದೆ.  ಈ ಮಹಾಕಾವ್ಯಕ್ಕೆ ಮೂಲ ಸಂಸ್ಕøತದ ಸ್ಕಾಂದ ಪುರಾಣ.

ಈ ಕಾವ್ಯದ ಪ್ರಥಮಾಶ್ವಾಸದಲ್ಲಿ ಕಾಳಹಸ್ತಿಪುರವರ್ಣನೆ, ಪರಮೇಶ್ವರ ಜಂಗಮ ರೂಪ ಧರಿಸಿ ಬಂದು ಯಾದವರಾಜನಿಗೆ ಶ್ರೀಕಾಳಹಸ್ತಿ ಮಹಾತ್ಮ್ಯೆ ಹೇಳುವುದು, ಅಗಸ್ತ್ಯ ಕಾಳಹಸ್ತಿಗೆ ಬರುವುದು ಸುವರ್ಣಮುಖಿ ಎಂಬ  ನದಿಯ ಉಗಮ -  ಈ ಕಥಾಭಾಗಗಳಿವೆ.  ದ್ವಿತೀಯಾಶ್ವಾಸದಲ್ಲಿ ಶ್ರೀ, ಕಾಳ, ಹಸ್ತಿಗಳ ಕಥೆಗಳು ವರ್ಣಿತವಾಗಿವೆ.  ತೃತೀಯಾಶ್ವಾಸದಲ್ಲಿ ತಿನ್ನಡು ಎಂಬವನ ಕಥೆ ಅತ್ಯಂತ ಮಧುರವಾಗಿ ಬಣ್ಣಿಸಲ್ಪಟ್ಟಿದೆ.   ತಿನ್ನಡು ಕಿರಾತಕನಾಗಿದ್ದ ಕಾಲದಿಂದ ಅವನಿಗೆ ಶಿವಲಿಂಗ ದರ್ಶನವಾಗುವವರೆಗೂ ಇರುವ ಕಥನದಲ್ಲಿ ಆಟವಿಕರ ಜೀವನ, ಆಚಾರಗಳು, ಸಂಪ್ರದಾಯಗಳು, ಬೇಟೆ ಮುಂತಾದವುಗಳ ಚಿತ್ರ ಬಹಳ ಸೊಗಸಾಗಿ ನಿರೂಪಿಸಲ್ಪಟ್ಟಿವೆ.  ನತ್ಕೀರನ ಕಥೆಯೂ ಈ ಆಶ್ವಾಸದಲ್ಲೇ ಇದೆ.  ಚತುರ್ಥಾಶ್ವಾಸದಲ್ಲಿ ಮಧುರಾಪುರದಲ್ಲಿದ್ದ ಇಬ್ಬರು ವೇಶ್ಯಾಕನ್ಯೆಯರು ತಾಯಿಯ ಉಪದೇಶದಂತೆ ವೇಶ್ಯಾಧರ್ಮವನ್ನು ಅವಲಂಬಿಸದೆ ಶಿವಭಕ್ತಿಯಿಂದ ಸಾಯುಜ್ಯವನ್ನು ಪಡೆದ ಕಥೆ ವರ್ಣಿತವಾಗಿದೆ.  ಇದು ಶಾಂತರಸ ಪ್ರಧಾನವಾದ ಮಹಾಕಾವ್ಯ.  ಶೃಂಗಾರ, ಹಾಸ್ಯ, ವೀರ, ಕರುಣ ರಸಗಳು ಅಂಗಿಕವಾಗಿವೆ.
(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ